ಕೊಂಡಾನೆ

	ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯಲ್ಲಿ ಕಾರ್ಜುಕ್‍ನಿಂದ ಪಶ್ಚಿಮಕ್ಕೆ 4 ಮೈಲಿಗಳ ಮತ್ತು ಕಾರ್ಲೆಯಿಂದ ನೈಋತ್ಯಕ್ಕೆ 10 ಮೈಲಿಗಳ ದೂರದಲ್ಲಿರುವ ಒಂದು ಸ್ಥಳ: ಬೌದ್ಧರಿಗೆ ಪವಿತ್ರ. ಇದರ ಬಳಿಯ ಗುಡ್ಡದ ಕಡಿದಾದ ಮುಖದಲ್ಲಿ ಕ್ರಿಸ್ತಪೂರ್ವದ ಅಂತ್ಯಕಾಲದಲ್ಲಿ ಕೊರೆಯಲಾದ ಬೌದ್ಧ ಚೈತ್ಯ ಮತ್ತು ವಿಹಾರಗಳಿವೆ. ಚೈತ್ಯದ ಕಟ್ಟಡ 66' ಉದ್ದ, 26 1/2 ' ಅಗಲ ಮತ್ತು 28' ಎತ್ತರವಿದೆ. ಹಜಾರದಲ್ಲಿ 30 ಕಂಬಗಳಿದ್ದು, ಅವುಗಳ ತಳಭಾಗ ನಶಿಸಿಹೋಗಿದೆ. ಮೇಲ್ಭಾಗದಲ್ಲಿ ಚೌಕಾಕಾರವಾಗಿದ್ದು ಚಾವಣಿಯಿಂದ 11/2 ' ಕೆಳಗೆ ಅಷ್ಟಮುಖಗಳನ್ನು ಉಳ್ಳದ್ದಾಗಿರುವುದು ಕಂಬದ ವೈಶಿಷ್ಟ್ಯ. ಮುಖ್ಯದ್ವಾರದ ಬಳಿಯ 2 ಕಂಬಗಳ ಮಧ್ಯೆ ಮರದ ಹಲಗೆಗಳಿಂದ ಗೋಡೆಯನ್ನು ನಿರ್ಮಿಸಿ, ಅದರಲ್ಲಿ ಬಾಗಿಲನ್ನು ಇಡಲಾಗಿತ್ತು. ಈಗ ಆ ಭಾಗ ಪೂರ್ಣವಾಗಿ ಹಾಳಾಗಿದೆ. ಕೆಲವು ಕಂಬಗಳು ಒಳಪಾಶ್ರ್ವಕ್ಕೆ ಬಾಗಿವೆ. ಮರದ ಕಟ್ಟಡಗಳಲ್ಲಿ ಚಾವಣಿಯನ್ನು ಭದ್ರವಾಗಿ ಎತ್ತಿ ಹಿಡಿಯಲು ಈ ರೀತಿಯ ಬಾಗಿದ ಕಂಬಗಳನ್ನು ನಿಲ್ಲಿಸುತ್ತಿದ್ದರು. ಆದ್ದರಿಂದ ದಾರುಶಿಲ್ಪದಿಂದ ಕಲ್ಲಿನ ವಾಸ್ತು ನಿರ್ಮಾಣಕ್ಕೆ ಬದಲಾಗುತ್ತಿದ್ದ ಆದಿಕಾಲಕ್ಕೆ ಗುಹಾಚೈತ್ಯಾಲಯ ಸೇರುತ್ತದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕಮಾನಿನಾಕಾರದ ಚಾವಣಿಗೆ ಮರದ ತೊಲೆಗಳಿದ್ದವು. ಈಗ ಅವು ನಶಿಸಿಹೋಗಿವೆ.

	ಚೈತ್ಯಾಲಯದ ಈಶಾನ್ಯಕ್ಕೆ ಒಂದಂತಸ್ತಿನ ವಿಹಾರದ ಕಟ್ಟಡವಿದೆ. ವಿಹಾರದ ಮೊಗಸಾಲೆ 18' ಉದ್ದ ಮತ್ತು 5' 8" ಅಗಲವಾಗಿದೆ. ಒಳಗಿನ ಹಜಾರ 29' ಉದ್ದ, 23' ಅಗಲ ಮತ್ತು 8 1/4' ಎತ್ತರವಾಗಿದೆ. ಹೀನಯಾನ ಬೌದ್ಧಪಂಥದ ವಿಹಾರಗಳ ಪೈಕಿ ಇಲ್ಲಿ ಮಾತ್ರ ಹಜಾರದಲ್ಲಿ ಕಂಬಗಳು ಕಂಡುಬರುತ್ತವೆ. ಇದರ ಚಾವಣಿ ಕಟ್ಟಡದಲ್ಲಿ ಮಂದಿರಗಳಲ್ಲಿರುವಂತೆ 19" x 8" ತೊಲೆಗಳಿವೆ. ಇದರ ಮೂರು ಪಾಶ್ರ್ವಗಳಲ್ಲಿ ವಾಸದ ಕೋಣೆಗಳನ್ನು ನಿರ್ಮಿಸಲಾಗಿದೆ.

	ಈ ಚೈತ್ಯ ಮತ್ತು ವಿಹಾರಗಳಲ್ಲಿ ಮರದ ಕಟ್ಟಡಗಳಲ್ಲಿರುವಂತೆ ವಿವಿಧ ರೀತಿಯ ಅಲಂಕಾರಗಳಿರುವುದರಿಂದ ಆ ಮೊದಲಿನ ಮರದ ಕಟ್ಟಡಗಳ ಮಾದರಿಯಲ್ಲಿ ಇವನ್ನು ನಿರ್ಮಿಸಲಾಗಿದೆಯೆಂದು ಅಭಿಪ್ರಾಯಪಡಲಾಗಿದೆ. ಸುಮಾರು ಇದೇ ಕಾಲಕ್ಕೆ ಸೇರಿದ ಮತ್ತೊಂದು ಬೌದ್ಧಕ್ಷೇತ್ರವಾದ ಭಾಜಾದ ಚೈತ್ಯ ವಿಹಾರಗಳಂತೆ ಕೊಂಡಾನೆಯ ನಿರ್ಮಾಣಗಳೂ ಪಶ್ಚಿಮ ಭಾರತದ ಬೌದ್ಧ ನಿರ್ಮಾಣಗಳಲ್ಲಿ ಮೊದಲ ಹಂತಕ್ಕೆ ಸೇರುತ್ತವೆ.					(ಜಿ.ಎಚ್.; ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ